ಮೂಗಿನಲ್ಲಿ ರಕ್ತಸ್ರಾವ - 
ಮೂಗಿನ ಹೊಳ್ಳೆಗಳಿಂದ ಆಗುವ ರಕ್ತಸ್ರಾವ (ನೋಸ್ ಬ್ಲೀಡಿಂಗ್, ಎಪಿಸ್ಟಾಕ್ಸಿಸ್). ಗ್ರೀಕ್ ಮೂಲದ ಎಪಿಸ್ಟಾಕ್ಸಿಸ್ ಎಂಬ ಶಬ್ದಕ್ಕೆ ತೊಟ್ಟು ತೊಟ್ಟಾಗಿ ಬೀಳುವುದು ಎಂಬ ಅರ್ಥವಿದೆ. ಅಂತೆಯೇ ಮೂಗಿನ ರಕ್ತಸ್ರಾವದಲ್ಲಿ ಮೂಗಿನಿಂದ ರಕ್ತ ಹರಿದುಬರುತ್ತಿದ್ದು ತಲೆಯನ್ನು ಮುಂದಕ್ಕೆ ಬಗ್ಗಿಸಿದರೆ ರಕ್ತದ ತೊಟ್ಟುಗಳೇ ಕೆಳಗೆ ಬೀಳುತ್ತವೆ. ಮೂಗಿನ ರಕ್ತಸ್ರಾವ ಯಾರಲ್ಲೂ ಯಾವ ವಯಸ್ಸಿನಲ್ಲೂ ಕಂಡುಬರಬಹುದು. ಕೆಲವರಲ್ಲಿ ಮೂಗಿನ ರಕ್ತಸ್ರಾವ ಬಹು ಅಲ್ಪ ಕಾರಣಗಳಿಂದಲೇ ಆಗುತ್ತದೆ. ಉಸಿರಾಡುವ ವಾಯು ಹಠಾತ್ತಾಗಿ ಬಿಸಿ ಅಥವಾ ಬಹು ತಂಪು ಆದರೆ ರಕ್ತಸ್ರಾವವಾಗಬಹುದು. ಮೂಗನ್ನು ಕರವಸ್ತ್ರದಿಂದ ಪದೇ ಪದೇ ಒರೆಸಿಕೊಳ್ಳುವುದು, ಮೇಲಿಂದ ಮೇಲೆ ಸೀನುವುದು ಇವುಗಳಿಂದ ಕೂಡ ಮೂಗಿನ ರಕ್ತಸ್ರಾವವಾಗುವುದು ಇಂಥ ಸೂಕ್ಷ್ಮ ಪ್ರಕೃತಿಯವರಲ್ಲಿ ಸಾಮಾನ್ಯ. ಇಂಥವರಲ್ಲಿ ಪರ್ವತ ಏರಿದಾಗಲೂ ವಿಮಾನದಲ್ಲಿ ಪ್ರಯಾಣ ಮಾಡುವಾಗಲೂ ಹಠಾತ್ತಾಗಿ ಮೂಗಿನ ರಕ್ತಸ್ರಾವವಾಗುವುದಿದೆ. ಕೆಲವು ಸ್ತ್ರೀಯರಲ್ಲಿ ಋತುಸ್ರಾವವಾಗುತ್ತಿರುವ ಕಾಲದಲ್ಲಿ ಆಗಾಗ್ಗೆ ಮೂಗಿನಿಂದ ರಕ್ತಸ್ರಾವವಾಗುವುದುಂಟು. ಆದರೆ ವಿಶೇಷ ಕಾರಣಗಳಿಂದಲೂ ಮೂಗಿನ ರಕ್ತಸ್ರಾವ ಪ್ರಾರಂಭವಾಗಬಹುದು. ಮೂಗಿಗೆ ಏಟುಬಿದ್ದು ಮೂಗಿನ ಹೊಳ್ಳೆಯ ಲೋಳೆ ಪೊರೆಯ (ನೇಸಲ್ ಮ್ಯೂಕಸ್ ಮೆಂಬ್ರೇನ್) ಅಡಿಯಲ್ಲಿರುವ ರಕ್ತನಾಳಗಳು ಛಿದ್ರಿಸಿ ರಕ್ತಸ್ರಾವ ಆಗಬಹುದು. ಏಟು ಇನ್ನೂ ಬಲವಾಗಿದ್ದರೆ ಮೂಗಿನ ಮೂಳೆಯೋ ಮೃದ್ವಸ್ಥಿಯೋ ಮುರಿದು ಅದರಿಂದ ರಕ್ತನಾಳಗಳು ಛಿದ್ರಿಸಿ ರಕ್ತಸ್ರಾವ ಆಗುವುದೂ ಇದೆ. ಎರಡೂ ಹೊಳ್ಳೆಗಳ ನಡುವಿರುವ ತಡಿಕೆಯಲ್ಲಿ ವ್ರಣವಾಗಿ ಅದರ ಮೇಲೆ ಹೊಕ್ಕುಕಟ್ಟಿ ನವೆ ಆಗಿ ಕೆರೆದುಕೊಂಡಾಗ ಹೊಕ್ಕು ಕಿತ್ತು ಬಂದು ವ್ರಣದಿಂದ ರಕ್ತಸ್ರಾವ ಆಗಬಹದು. ಮಕ್ಕಳು ಮಣಿ, ಬಳಪ, ಸೀಸದ ಕಡ್ಡಿ ತುಂಡು ಇತ್ಯಾದಿಗಳನ್ನು ಮೂಗಿನ ಒಳಕ್ಕೆ ತೂರಿಸಿಬಿಟ್ಟು ಅದನ್ನು ತೆಗೆಯುವ ಪ್ರಯತ್ನದಲ್ಲಿ ಇಲ್ಲವೇ ಮೂಗಿನ ಹೊಕ್ಕನ್ನು ತೆಗೆಯುವ ಸಂದರ್ಭದಲ್ಲಿ ಗಾಯ ಮಾಡಿಕೊಳ್ಳುವುದರಿಂದ ಮೂಗಿನ ರಕ್ತಸ್ರಾವ ಆಗುವುದೂ ಇದೆ. ಮೂಗಿನೊಳಗೆ ಗಂತಿ ಉದ್ಭವಿಸಿದ್ದರು ಕೂಡ (ಅದು ಏಡಿಗಂತಿಯೇ ಆಗಿರಬೇಕಾಗಿಲ್ಲ) ಮೂಗಿನಿಂದ ರಕ್ತಸ್ರಾವವಾಗುವುದು ಸಾಮಾನ್ಯ. ತಲೆಗೆ ಏಟು ಬಿದ್ದಿರುವಾಗ ಮೂಗಿನಿಂದ ರಕ್ತಸ್ರಾವ ಆಗುವುದು ಪ್ರಸಂಗದ ಭೀಕರತೆಯ ಸೂಚನೆ. ಏಕೆಂದರೆ ಇದು ಬುರುಡೆಯ ತಳದ ಮುಂಭಾಗ ಭಂಗವಾಗಿರುವುದರ ಮತ್ತು ಅಪಾಯಕರ ಸ್ಥಿತಿಯ ಲಕ್ಷಣ. ಟೈಫಾಯಿಡ್, ಡಿಫ್ತೀರಿಯ ಮುಂತಾದ ಸೋಂಕು ರೋಗಗಳಲ್ಲಿ ಮೂಗಿನ ರಕ್ತಸ್ರಾವ ಅನೇಕ ವೇಳೆ ವಿಶಿಷ್ಟ ಲಕ್ಷಣವಾಗಿರುತ್ತದೆ.

	ಅಧಿಕ ರಕ್ತ ಒತ್ತಡ ಉಳ್ಳವರಲ್ಲಿ ಮತ್ತು ಬಲ ಹೃದಯ ಸೋಲು ಕಂಡುಬಂದ ವ್ಯಕ್ತಿಗಳಲ್ಲಿ ಅನೇಕರಿಗೆ ಮೂಗಿನಿಂದ ರಕ್ತಸ್ರಾವವಾಗುವುದಿದೆ. ವಾಸ್ತವವಾಗಿ ಇಂಥ ರಕ್ತಸ್ರಾವದಿಂದ ಅವರಿಗೆ ಸ್ವಲ್ಪಮಟ್ಟಿಗೆ ಅನುಕೂಲವೇ ಆಗುತ್ತದೆ. ಆದ್ದರಿಂದ ಇಂಥ ಪ್ರಸಂಗಗಳಲ್ಲಿ ರಕ್ತಸ್ರಾವವನ್ನು ನಿಲ್ಲಿಸಲು ಆತುರಪಡುವುದು ಅಷ್ಟು ವಿವೇಕವಲ್ಲ. ಆದರೂ ಮೂಗಿನ ರಕ್ತಸ್ರಾವ ಅಗಾಧವಾಗಿದ್ದರೆ ಅಲ್ಲವೇ ಪದೇ ಪದೇ ಆಗುತ್ತಿದ್ದರೆ ಅದರ ಚಿಕೆತ್ಸೆಗೆ ಪ್ರಯತ್ನಿಸಬೇಕಾದ್ದು ಆವಶ್ಯಕ.

	ಮೂಗಿನಿಂದ ರಕ್ತಸ್ರಾವವಾಗುತ್ತಿರುವುದನ್ನು ತಡೆಗಟ್ಟಲು ವ್ಯಕ್ತಿಯ ತಲೆಯನ್ನು ಸ್ವಲ್ಪ ಹಿಂದಕ್ಕೆ ಬಗ್ಗಿಸಬೇಕು. ಮಲಗಿಸುವುದು ಒಳ್ಳೆಯದೇ. ಎದೆ ಕುತ್ತಿಗೆಗಳೆಡೆಯಲ್ಲಿ ಬಟ್ಟೆ ಸಡಿಲಿಸಬೇಕು. ವ್ಯಕ್ತಿ ನಿಧಾನವಾಗಿ ಆದರೆ ದೊಡ್ಡದಾಗಿ ಬಾಯಿಂದಲೇ ಉಸಿರಾಡುವಂತೆ ಹೇಳಬೇಕು. ಕುತ್ತಿಗೆಯ ಹಿಂದೆ ಮತ್ತು ಮೂಗಿನ ಅಗ್ರದಲ್ಲಿ ತಣ್ಣೀರು ಇಲ್ಲವೆ ಮಂಜುಗಡ್ಡೆಯಿಂದ ತಂಪು ಮಾಡಬೇಕು. ರಕ್ತಸ್ರಾವ ನಿಲ್ಲದಿದ್ದರೆ ಮೂಗಿನ ಎರಡು ಹೊಳ್ಳೆಗಳನ್ನೂ ಭದ್ರವಾಗಿ ಅವುಕಿ ಹಿಡಿಯಬೇಕು. ಹೀಗೆ ನಾಲ್ಕೈದು ಮಿನಿಟುಗಳು ಹಿಡಿದಿದ್ದ ಮೇಲೂ ರಕ್ತಸ್ರಾವ ಆಗುತ್ತಿದ್ದರೆ ಶುದ್ದವಾದ ಹತ್ತಿಯನ್ನು ಬೋರಿಕ್ ದ್ರಾವಣದಲ್ಲಿ ಅದ್ದಿ ಮೂಗಿಗೆ ಎಚ್ಚರಿಕೆಯಿಂದ ಹಿಡಿಯಬೇಕು ಹಾಗೂ ರಕ್ತಸ್ರಾವ ನಿಲ್ಲದಿದ್ದರೆ ತಡಮಾಡದೆ ತಜ್ಞ ವೈದ್ಯರಲ್ಲಿ ಚಿಕಿತ್ಸೆಮಾಡಿಸಬೇಕು.

	ಮೂಗಿನಿಂದ ಹೊರಬರುತ್ತಿರುವ ರಕ್ತ ಒಳಕ್ಕೂ ಹರಿದು ವ್ಯಕ್ತಿಯ ಗಂಟಲನ್ನು ಪ್ರವೇಶಿಸಬಹುದು. ವ್ಯಕ್ತಿ ಕೆಮ್ಮಿದಾಗ ಇದು ಶ್ಲೇಷ್ಮದ ಜೊತೆ ಹೊರಬರುತ್ತದೆ. ವ್ಯಕ್ತಿ ಆ ರಕ್ತವನ್ನು ನುಂಗಿಬಿಟ್ಟಿದ್ದು ಆಮೇಲೆ ಅದು ವಮನವಾಗುವುದೂ ಉಂಟು. ಹೀಗೆ ರಕ್ತಶ್ಲೇಷ್ಮ ರಕ್ತವಮನ ಆದಲ್ಲಿ ವೃಥಾ ಗಾಬರಿ ಆಗಬಾರದು
(ಎಚ್.ವಿ.ಎಸ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ